Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Thursday, December 31, 2015

ಹೊಸ ವರ್ಷದ ಕ್ಷಣಗಣನೆ

ಹೊಸ ವರ್ಷದ ಕ್ಷಣಗಣನೆ
 
ಹಳೆ ವರ್ಷ ಹೋಯಿತು ಹೊಸ ವರ್ಷ ಬಂದಿತು ಎನ್ನುವುದು ವಾಡಿಕೆಯಲ್ಲಿದ್ದ ಒಂದು ಮಾತು. ಅಂದರೆ ಕಾಲ ಚಲಿಸುತ್ತಿದೆ ಎಂದರ್ಥ. ಇದು ಕಾಲ-ಚಕ್ರದ ಸಂಕೇತ.
 
ಇಂದು ಮಧ್ಯರಾತ್ರಿ ಸರಿಯಾಗಿ ೧೨ ಘಂಟೆಗೆ  ಹಳೆಯ ವರ್ಷ ಮುಗಿಯುತ್ತಿದ್ದಂತೆಯೇ ಹೊಸದೊಂದು ವರ್ಷ ಆರಂಭವಾಗಲಿದೆ. ಜನರು ತಮ್ಮ ಹರ್ಷವನ್ನು ವಿವಿಧ ರೀತಿಯಲ್ಲಿ  ಪ್ರಕಟಿಸುವರು. ಇಂದಿನ  ತಾಂತ್ರಿಕ ಯುಗದಲ್ಲಿ ವಿಭಿನ್ನ ರೀತಿಯಲ್ಲಿ  ಹೊಸ ವರ್ಷದ ಕ್ಷಣಗಣನೆ ನಡೆಯುತ್ತದೆ. ವಾಟ್ಸ್- ಆಪ್, ಟ್ವಿಟ್ಟರ್ , ಫೇಸ್ ಬುಕ್ ,ಅಂತರ್ ಜಾಲ ದ ಮೂಲಕ ಅತೀ ಕಡಿಮೆ ಸಮಯದಲ್ಲಿ ಅತಿ ಶೀಘ್ರವಾಗಿ ಹೊಸ ವರ್ಷದ ಹರ್ಷವನ್ನು ಪರಸ್ಪರ ಹಂಚ್ಕೊಳ್ತೇವೆ. 
 
ಇಂಗ್ಲೆಂಡ್ ನ ರೋಮ್ಯಾಂಟಿಕ್ ಕವಿ ಪಿ ಬಿ ಶೆಲ್ಲಿ 'ಸ್ಕೈ ಲಾರ್ಕ್'  ಕವಿತೆ ಬರೆದ.ಸ್ಕೈ ಲಾರ್ಕ್ ಬೂದು ಬಣ್ಣದ ಚಿಕ್ಕ ಹಕ್ಕಿ. ಕಣ್ಣಿಗೆ ಕಾಣದಷ್ಟು ಎತ್ತರಕ್ಕೆ ಹಾರುತ್ತ ಹಾಡುತ್ತ ತನ್ನ ಹರ್ಷವನ್ನು ಹಂಚುತ್ತದೆ. ಅದೇ ರೀತಿ ಹೊಸವರ್ಷದ ಕ್ಷಣಗಣನೆ ಮಾಡುತ್ತಾ ಹರ್ಷವನ್ನು ಹಂಚುತ್ತಾ ನಾವು ಸಂಭ್ರಮಿಸುತ್ತೇವೆ.     
 
ಅಂದು ನಲವತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಆದರೂ ನಾವು ಅಮ್ಮನ ಮನೆಯಲ್ಲಿ ಹೊಸವರ್ಷದ ಕ್ಷಣಗಣನೆ  ಮಾಡುತ್ತಿದ್ದೆವು.
 
ಪ್ರತಿ ವರ್ಷ ಡಿಸೆಂಬರ್ ೩೧ ನೇ ತಾರೀಖಿನ ಮಧ್ಯ ರಾತ್ರಿ  ಸರಿಯಾಗಿ ೧೨ ಘಂಟೆ ಗೆ ಚಾಕ್ ಪೀಸ್ ತೆಗೆದುಕೊಂಡು ಗೋಡೆಯ ಮೇಲೆ ಹೊಸವರ್ಷದ ದಿನಾಂಕವನ್ನು ಬರೆದು ಸಂಭ್ರಮಿಸುತ್ತಿದ್ದೆವು. ಇದು ನಮಗೆ ನಾವೇ ಮಾಡಿಕೊಂಡ ಪಂದ್ಯ.
 
 ಅಕ್ಕ-ತಂಗಿಯರಲ್ಲಿ ಸರಿಯಾದ ಸಮಯಕ್ಕೆ ಯಾರು ಮೊದಲು ಬರೆಯುತ್ತಾರೆ ಎಂದು ಪೈ ಪೋಟಿ ನಡೆಯುತ್ತಿತ್ತು. ಆಗ ಈಗಿನ ಹಾಗೆ ಟಿ ವಿ ಇರಲಿಲ್ಲ. ರಾತ್ರೆ ೧೨ ಘಂಟೆಯ ವರೆಗೂ ಎಚ್ಚರವಾಗಿ ಇರುವುದು ಕಷ್ಟವೇ ಆಗುತಿತ್ತು. ಮನೆಯ ದೊಡ್ಡದಾದ  ಮಾಳಿಗೆಯಲ್ಲಿ ಒಬ್ಬರ ಪಕ್ಕ ಇನ್ನೊಬ್ಬರಂತೆ ನಾವೆಲ್ಲಾ ಆರು ಅಕ್ಕ-ತಂಗಿಯರು ಮಲಗುತ್ತಿದ್ದೆವು. ಎಲ್ಲರಲ್ಲೂ ತಾನೂ ಮೊದಲು ಹೊಸವರ್ಷದ ದಿನಾಂಕ ಗೋಡೆಯ ಮೇಲೆ ಬರೆಯ ಬೇಕು ಎನ್ನುವ ತವಕ ಇರುತ್ತಿತ್ತು.
 
 ಮತ್ತೊಬ್ಬರಿಗೆ ಎಚ್ಚರವಾಗದಂತೆ ಕಾಳಜಿವಹಿಸಿ ಸಾವಕಾಶವಾಗಿ ಬೆಕ್ಕಿನ ಹೆಜ್ಜೆಇಟ್ಟು ನಡೆಯುತ್ತಾ ಹೋಗಿ ಗೋಡೆಯಮೇಲೆ ಬರೆಯಬೇಕಾಗುತ್ತಿತ್ತು. ಮೊಟ್ಟಮೊದಲು ಯಾರು ಬರೆಯುತ್ತಾರೋ ಅವರಿಗೆ ಸಣ್ಣ ಗಿಫ್ಟಸಿಗ್ತಿತ್ತು.  ನಮ್ಮದು ಈ ರೀತಿಯ ಕ್ಷಣಗಣನೆಯಾಗಿತ್ತು. ಹೀಗೆ ಸಂಭ್ರಮಿಸಿ ಖುಷಿಪಡುತ್ತಿದ್ದೆವು.
 
ಈ ಹೊಸ  ವರ್ಷದ ಕ್ಷಣಗಣನೆ ಅತ್ಯಂತ ರೋಚಕ -ರೋಮಾಂಚಕ.ಈ ಹೊಸ ವರ್ಷ ಎಲ್ಲ ಕಡೆಯಲ್ಲೂ ಹೊಸತನ್ನು ತರಲಿ ಎಂದು ಆಶಿಸುವೆ.
 
                                      Indu Naik
 
   

No comments :

Post a Comment