ಮಕರ ಸಂಕ್ರಾಂತಿ
ಹಾಯ್, ಸರ್ವರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಸಂಕ್ರಾಂತಿಯ ಅರ್ಥ ನಮ್ಮ ಹಿರಿಯರು ಹೇಳುವ ಹಾಗೆ , 'ಸಂಯಕ್ ಕ್ರಮಣ ' ಅಂತ. ಅಂದ್ರೆ ಒಳ್ಳೆಯ ನಡಿಗೆ. ಸಂಕ್ರಮಣ ನವ ಮನ್ವಂತರದ ಆಮಂತ್ರಣ.
ಇದು ಸೂರ್ಯನ ಉತ್ತರಾಭಿಮುಖದ ಚಲನೆ. ಈ ಚಲನೆ ಡಿಸೆಂಬರ್ 22ಅಥವಾ 23ರಂದು ಆರಂಭಗೊಳ್ಳುತ್ತದೆ. ಇದು ಸಾಯನ ಪಧ್ಧತಿ. ಈ ಚಲನೆ ಜನೆವರಿ 14 ಅಥವಾ 15 ರಂದು ಆರಂಭಗೊಳ್ಳುವುದು ನಿರಯಣ ಪಧ್ಧತಿ ಎಂದು ನನ್ನ ಅಜ್ಜಿ ತನ್ನ ಆಡು ಭಾಷೆಯಲ್ಲಿ ಹೇಳಿದ್ದಳು.
ಸೂರ್ಯ ತನ್ನ ಪಯಣವನ್ನು ಉತ್ತರದ ಕಡೆಗೆ ಪ್ರಾರಂಭಿಸುತ್ತಾನೆ. ಹಾಗಾಗಿ ಉತ್ತರಾಯಣಕ್ಕೆ ಆರಂಭವಾಗುವ ಈ ಪರ್ವ ಕಾಲವೇ ಸಂಕ್ರಾಂತಿ. ಈ ಹಬ್ಬ ನಿಮ್ಮೆಲ್ಲರಲ್ಲೂ ಹೊಸ ತನ,ಹೊಸ ಹುರುಪು, ಹೊಸ ಬಾಳು, ಹೊಸ ಚೇತನ ಉಂಟುಮಾಡಲಿ ಎಂದು ಹಾರೈಸುವೆ.
ನಾವು ಚಿಕ್ಕವರಿದ್ದಾಗ ಆಚರಿಸಿದ ಸಂಕ್ರಾಂತಿ ಹಬ್ಬದ ಸಂಭ್ರಮವೇ ಬೇರೆಯಾಗಿತ್ತು. ನಮ್ಮಲ್ಲಿ ಅದೆಂತಹ ಖುಷಿ ಇರುತ್ತಿತ್ತು.
ಹಬ್ಬ ಎಂದರೆ ಸಂತಸದ ವಾತಾವರಣ. ಹೊಸ ಬಟ್ಟೆ ತೊಟ್ಟು,ಜಡೆ ಹೆಣೆದುಕೊಂಡು, ರಿಬ್ಬನ್ ಕಟ್ಟಿ, ಕಿವಿ ಓಲೆ, ಮುತ್ತಿನ ಸರ, ಬಣ್ಣ-ಬಣ್ಣದ ಆಕರ್ಷಕ ಬಳೆಗಳನ್ನು ತೊಟ್ಟು, ಕೈಯಲ್ಲಿ ಬಂಗಾರ ಬಣ್ಣದ ಡಬ್ಬದಲ್ಲಿ ಉತ್ತರ-ಕನ್ನಡದಲ್ಲಿ ಸಿಗುವ, ಮನೆಯಲ್ಲಿಯೇ ತಯಾರಿಸುವ ವಿಶಿಷ್ಟ 'ತಿಳುಗುಳ ' (ಎಳ್ಳು-ಬೆಲ್ಲ) ವನ್ನು ತುಂಬಿಕೊಂಡು ಅಕ್ಕ-ತಂಗಿಯರು, ಗೆಳತಿಯರೆಲ್ಲರೂ ಒಟ್ಟಾಗಿ ಗುಂಪಿನಲ್ಲಿ ಹಿರಿಯರಿಗೆಲ್ಲಾ ಕೊಟ್ಟು ನಮಸ್ಕರಿಸಿ, ಅಕ್ಕ-ಪಕ್ಕದ ಮನೆಯವರಿಗೆ ಸಿಹಿ ಹಂಚಿ, ವಠಾರದಲ್ಲಿ ಇರುವವರಿಗೆಲ್ಲಾ ' ಎಳ್ಳು-ಬೆಲ್ಲ ತಿನ್ನೋಣ ಒಳ್ಳೊಳ್ಳೆ ಮಾತಾಡೋಣ' ಎಂದು ಸಿಹಿ ಹಂಚಿ ಖುಷಿಪಟ್ಟು ಬರುತ್ತಿದ್ದೆವು.
ಆಗ ಮನಸ್ಸಿಗೆ ಆಗುವ ಆನಂದಕ್ಕೆ ಮಿತಿಯೇ ಇರುತ್ತಿರಲಿಲ್ಲ. ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ.
ಆದರೆ ಈಗ ಹಾಗಿಲ್ಲ. ತಾಂತ್ರಿಕತೆಯಿಂದ ಅದ್ಭುತ ಬದಲಾವಣೆಗೊಂಡಿದೆ. ಸ್ಕೈಪ್, ಮೊಬೈಲ್, ವಾಟ್ಸ್-ಆಪ್ ಗಳಿಂದ ಕ್ಷಣ ಮಾತ್ರದಲ್ಲಿ ವಿದೇಶದಲ್ಲಿರುವ ನನ್ನ ಮಗ, ಮಗಳು ಮತ್ತು ಅಳಿಯ ಸಂಕ್ರಾಂತಿಯ ಶುಭಹಾರೈಕೆಗಳನ್ನು ಒಳಗೊಂಡ ಚಿತ್ರಗಳನ್ನು, ವಿಡಿಯೋಗಳನ್ನು ಕಳಿಸಿ ಸಂಭ್ರಮಿಸಿದ್ದಾರೆ. ಇಂದಿನ ಅವಸರದ ಜೀವನದಲ್ಲಿ ಇಷ್ಟಾದರೆ ಎಷ್ಟೋ ಖುಷಿ ಸಿಕ್ಕಂತ್ತಾಗುತ್ತದೆ.
ಖುಷಿ ಹಂಚಿಕೊಂಡಾಗ ಇಮ್ಮಡಿಯಾಗುತ್ತದೆಯಂತೆ. ಹಾಗಾಗಿ ಓದುಗರಿಗೆಲ್ಲ ಸಂಕ್ರಾಂತಿಯ ಶುಭಕಾಮನೆಗಳು.
ನನ್ನದು ಎಲ್ಲರಿಗೂ ಒಳಿತಾಗಲಿ ಎನ್ನುವ ಆಶಯ.
Indu Naik
Very well written. Starting with an introduction to Sankranti, the message has come out just right. I recall how Puneet and me were excited about visiting neighbours n friends house on every Sankranti distributing sweets around. We even competed over owning beautiful 'tilugul' boxes on the day.. Sweet memories! Wish you n dad and everyone reading this post a very happy Makara Sankranti!
ReplyDelete